ನಿಕೊಲಸ್ 
ರಷ್ಯದ ಜಾóರ್ ಚಕ್ರವರ್ತಿಗಳು. ಒಂದನೆಯ ನಿಕೊಲಸ್ 1796ರ ಜುಲೈ 6ರಂದು ಜನಿಸಿದ. ನಿಕೊಲೇ ಪವ್ಲಾವಿಚ್ ಎಂಬುದು ಈತನ ರಷ್ಯನ್ ಹೆಸರು.  ಈತ 1ನೆಯ ಪಾಲನ ಮೂರನೆಯ ಮಗ.  ಮೊದಲನೆಯ ಮಗನಾಗಿದ್ದ 1ನೆಯ ಅಲೆಗ್ಸಾಂಡರನ ನಿಧನದ ಬಳಿಕ ಎರಡನೆಯ ಮಗ ಕಾನ್‍ಸ್ಟಂಟೈನ್ ರಾಜ್ಯಾಧಿಕಾರವನ್ನು ಪರಿತ್ಯಾಗ ಮಾಡಿದ್ದರಿಂದ ನಿಕೊಲಸ್ ಸಿಂಹಾಸನವನ್ನೇರಿದ. ಇವನು ಪ್ರಷ್ಯದ ರಾಜಕುಮಾರಿ ಷಾರ್ಲಟಳನ್ನು ವಿವಾಹವಾದ. ಈ ಸಂಬಂಧ ಯೂರೋಪಿನ ರಾಜಕಾರಣದ ಮೇಲೆ ಬಹಳ ಕಾಲ ಪರಿಣಾಮ ಬೀರಿತ್ತು.

ರಾಜ್ಯವಾಳುವುದು ಎಷ್ಟು ಕಷ್ಟವೆಂಬುದನ್ನು ಇವನು ಆರಂಭದಲ್ಲೇ ಅರಿತುಕೊಂಡ. ಆಗ ದೇಶದಲ್ಲಿ ಅಶಾಂತಿ ಹಬ್ಬಿತ್ತು. ಸೇಂಟ್ ಪೀಟರ್ಸ್‍ಬರ್ಗನ ಸೈನಿಕರು 1825ರ ಡಿಸೆಂಬರ್ 26ರಂದು ದಂಗೆ ಎದ್ದರು. ನಿಕೊಲಸ್ ಆ ದಂಗೆಯನ್ನು ಅಡಗಿಸಿದ. ಅಂದಿನಿಂದ ಈತ ನಿರಂಕುಶಪ್ರಭುತ್ವದ ಹಾದಿಯಲ್ಲಿ ನಡೆದ. ಪತ್ರಿಕಾ ಸ್ವಾತಂತ್ರ್ಯವನ್ನು ತೆಗೆದುಹಾಕಿದ. ನಾಗರಿಕರ ಎಲ್ಲ ಚಲನವಲನಗಳನ್ನೂ ಗಮನಿಸಲು ಮತ್ತು ಅಂಕೆಯಲ್ಲಿಡಲು ಗುಪ್ತ ಪೊಲೀಸು ದಳವನ್ನು ಸ್ಥಾಪಿಸಿದ.

ತನ್ನ ಮೂವತ್ತು ವರ್ಷಗಳ ಆಳ್ವಿಕೆಯಲ್ಲಿ ಇವನು ಮೂರು ಯುದ್ಧಗಳಲ್ಲಿ ಭಾಗವಹಿಸಿದ. 1828ರಲ್ಲಿ ತುರ್ಕಿಯ ಮೇಲೆ ಇವನು ಯುದ್ಧ ಸಾರಿದಾಗ ಇವನ ಸೇನೆ ಆ ದೇಶದ ರಾಜಧಾನಿಯ ಬಾಗಿಲಿನವರೆಗೆ ಮುನ್ನುಗ್ಗಿ, ಅಲ್ಲಿಯ ಸುಲ್ತಾನ ಒಪ್ಪಂದಕ್ಕೆ ಸಹಿ ಹಾಕುವಂತೆ ಬಲಾತ್ಕರಿಸಿತು. ಈ ಒಪ್ಪಂದದ ಪ್ರಕಾರ ತುರ್ಕಿ ಗ್ರೀಸಿನ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಬೇಕಾಯಿತು. ಸರ್ಬಿಯಕ್ಕೆ ಸ್ವಾಯತ್ತೆ ನೀಡಬೇಕಾಯಿತು, ಕೆಲವು ಪ್ರಾಂತ್ಯಗಳ ಮೇಲೆ ರಷ್ಯನ್ ಪಾಲಕತ್ವವನ್ನು ಸ್ಥಾಪಿಸಲು ಒಪ್ಪಬೇಕಾಯಿತು.

1833ರಲ್ಲಿ ಫ್ರೆಡರಿಕ್ ವಿಲಿಯಮ್, ಆಸ್ಟ್ರಿಯದ ಲೂಯಿ ಮೆಟರ್ನಿಕ್ ಮತ್ತು ನಿಕೊಲಸರು ಒಟ್ಟಿಗೆ ಸೇರಿ, ದಂಗೆಗಳನ್ನು ಎದುರಿಸಲು ಯೂರೋಪಿನ ಎಲ್ಲ ಅರಸರಿಗೆ ಸಹಾಯ ನೀಡುವುದಾಗಿ ಹೇಳಿಕೆ ಯೊಂದನ್ನು ಹೊರಡಿಸಿದರು. ಆ ಪ್ರಕಾರ ರಷ್ಯ ಆಸ್ಟ್ರಿಯಕ್ಕೆ ಸೈನ್ಯ ಸಹಾಯವನ್ನು ಒದಗಿಸಿಕೊಟ್ಟು 1849ರ ಆಗಸ್ಟ್‍ನಲ್ಲಿ ಅದರ ವಿರುದ್ಧ ಎದ್ದ ಹಂಗೇರಿಯನರ ಕ್ರಾಂತಿಯನ್ನು ಅಡಗಿಸಲು ನೆರವಾಯಿತು. 1853ರಲ್ಲಿ ಕ್ರಿಮಿಯನ್ ಯುದ್ಧ ಆರಂಭವಾಯಿತು. ರಷ್ಯದ ಸ್ಥಾನವನ್ನು ಬಲಪಡಿಸಿಕೊಳ್ಳಲು ಬ್ರಿಟನ್ ಅಡ್ಡಿಯಾಗಿದ್ದುದೇ ಈ ಯುದ್ಧದಲ್ಲಿ ರಷ್ಯ ಆಸಕ್ತಿ ವಹಿಸಲು ಕಾರಣ. ಆದರೆ ಈ ಯುದ್ಧದಲ್ಲಿ ಕೊನೆಗೆ ರಷ್ಯ ಸೋಲನ್ನೊಪ್ಪ ಬೇಕಾಯಿತು. ಹಂಗೇರಿಯನ್ ಕ್ರಾಂತಿಯನ್ನು ಜಯಿಸಲು ರಷ್ಯದಿಂದ ಸಹಾಯ ಪಡೆದ ಆಸ್ಟ್ರಿಯ ದೇಶ ಈ ಯುದ್ಧದಲ್ಲಿ ರಷ್ಯದ ಬೆಂಬಲಕ್ಕೆ ಬರಲಿಲ್ಲ.  ನಿಕೊಲಸನ ರಾಜನೀತಿ ಸಂಪೂರ್ಣವಾಗಿ ವಿಫಲಗೊಂಡಿತು. ಈತ 1855ರ ಮಾರ್ಚ್ 2ರಂದು ಸೇಂಟ್ ಪೀಟರ್ಸ್‍ಬರ್ಗಿನಲ್ಲಿ ವರಣ ಹೊಂದಿದ. ಅನಂತರ ಇವನ ಮಗ 2ನೆಯ ಅಲೆಗ್ಸಾಂಡರ್ ಪಟ್ಟಕ್ಕೆ ಬಂದ.
ನಿಕೊಲಸನದು ನಿರಂಕುಶ ಪ್ರಭುತ್ವವಾಗಿತ್ತು. ಸೈನ್ಯದ ನೆರವಿನಿಂದ ದಬ್ಬಾಳಿಕೆ ನಡೆಸುತ್ತಿದ್ದ ಈತ ಯಾವ ಬಗೆಯ ಸುಧಾರಣೆಗಳಿಗೂ ಎಡೆಕೊಡಲಿಲ್ಲ.

ಎರಡನೆಯ ನಿಕೊಲಸ್ 1868ರ ಮೇ 18ರಂದು ಜನಿಸಿದ. ತಂದೆಯಾದ 3ನೆಯ ಅಲೆಗ್ಸಾಂಡರನ ಮರಣಾನಂತರ 1894ರಲ್ಲಿ ಸಿಂಹಾಸನವನ್ನೇರಿದ. ಇವನು ರಷ್ಯದ ಕೊನೆಯ ಚಕ್ರವರ್ತಿ. ಜರ್ಮನ್ ರಾಜಕುಮಾರಿ ಅಲೆಗ್ಸಾಂಡ್ರಳು ಈತನ ಜೀವನದಲ್ಲಿ ಬಹು ಪ್ರಭಾವ ಬೀರಿದಳು. ಈತ ಅಸಮರ್ಥ, ನಿರಂಕುಶ ಪ್ರಭು. ದೊಡ್ಡ ಸಾಮ್ರಾಜ್ಯವನ್ನು ಆಳುವುದರಲ್ಲಿ ಅತ್ಯಂತ ವಿಫಲನಾದ. ನಿಕೊಲಸ್ ಏಷ್ಯದ ವ್ಯವಹರಗಳಲ್ಲಿ ಕೈಹಾಕಿದ ಪ್ರಥಮ ರಷ್ಯನ್ ಚಕ್ರವರ್ತಿ. ಇವನು ಸಿಂಹಾಸನವನ್ನೇರುವುದಕ್ಕೆ ಮುನ್ನವೇ, 1891ರಲ್ಲಿ ಭಾರತ, ಚೀನ ಜಪಾನ್‍ಗಳನ್ನು ಸಂದರ್ಶಿಸಿದ. ಟ್ರಾನ್ಸ್ ಸೈಬೀರಿಯನ್ ರೈಲ್ವೆ ನಿಮಾಣದಲ್ಲಿ ಇವನು ನೇರವಾದ ಆಸಕ್ತಿ ವಹಿಸಿದ್ದ. ಕೊರಿಯದಲ್ಲಿ ರಷ್ಯದ ಪ್ರಭಾವವನ್ನು ಬೆಳೆಸಲಯ ಯತ್ನಿಸಿ ಜಪಾನಿನೊಂದಿಗೆ ವಿರಸ ಕಟ್ಟಿಕೊಂಡ. 1904-5ರಲ್ಲಿ ಸಂಭವಿಸಿದ ರಷ್ಯಾ-ಜಪಾನ್ ಯುದ್ಧದಲ್ಲಿ ರಷ್ಯ ಸೋಲನ್ನನುಭವಿಸಬೇಕಾಯಿತು. ಚೀನ, ಟಿಬೆಟ್, ಪರ್ಷಿಯಗಳನ್ನೊಳಗೊಂಡ ಯೂರೋಪ್ಯ ಸಾಮ್ರಾಜ್ಯವಾಗಿ ರಷ್ಯವನ್ನು ಪರಿವರ್ತಿಸಬೇಕೆಂಬ ನಿಕೊಲಸನ ಆಕಾಂಕ್ಷೆ ಮಣ್ಣುಗೂಡಿತು.
ಈ ನಡುವೆ ಸ್ವದೇಶದಲ್ಲಿ ಜನರ ಅಶಾಂತಿ ಹಬ್ಬುತಿತ್ತು. ತನ್ನನ್ನು ವಿರೋಧಿಸಿದವರೆಲ್ಲ ಸಂಚುಗಾರರೆಂದೇ ಈತನ ಭಾವನೆಯಾಗಿತ್ತು. ಇವನು ಮೊದಲಿನಿಂದಲೂ ಉದಾರವಾಗಿ ವರ್ತಿಸಿದ್ದರೆ ಎಷ್ಟೋ ಘಟನೆಗಳನ್ನು ತಪ್ಪಿಸಬಹುದಾಗಿತ್ತು. 1905ರಲ್ಲಿ ಈತ ರಾಷ್ಟ್ರೀಯ ಪ್ರತಿನಿಧಿ ಸಭೆಗೆ ಒಪ್ಪಿಗೆ ನೀಡಬೇಕಾಯಿತು. ನಾಗರಿಕ ಹಕ್ಕು ಬಾಧ್ಯತೆಗಳಿಗೆ ಮನ್ನಣೆ ನೀಡಬೇಕಾಯಿತು.

ಆದರೆ ನಿಕೊಲಸ್ ವಚನಪರಿಪಾಲನೆ ಮಾಡಲಿಲ್ಲ. ಮತ್ತೆ ಇರಂಕುಶಾಧಿಕಾರವನ್ನು ಸ್ಥಾಪಿಸಲು 1906ರಲ್ಲಿ ಯತ್ನಿಸಿದ. ರಷ್ಯದ ಪ್ರತಿಗಾಮಿ ಸಂಸ್ಥೆಯೊಂದಕ್ಕೆ ಬೆಂಬಲ ನೀಡಿದ. ಅದು ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತವಾಗಿತ್ತಲ್ಲದೆ ಯೆಹೂದ್ಯ ವಿರೋಧಿ ಪ್ರಚಾರ ನಡೆಸುತ್ತಿತ್ತು. ಈತ ಪ್ರತಿನಿಧಿ ಸಭೆಯನ್ನು ವಿಸರ್ಜಿಸಿದ. ತನ್ನ ಪರವಾಗಿ ಕಾರ್ಯನಿರತವಾಗಿದ್ದ ಅಧಿಕಾರಗಳಲ್ಲೇ ಸಂಶಯ ತಳೆದ.

ಒಂದನೆಯ ಮಹಾಯುದ್ಧದಲ್ಲಿ ರಷ್ಯವೂ ಭಾಗವಹಿಸಿತು.  ಸಮರ್ಥ ಸೇನಾಧಿಪತಿಯನ್ನು ವಜಾಮಾಡಿ ನಿಕೊಲಸನೇ ಸೇನಾಧಿಪತ್ಯ ವಹಿಸಿದ. ಈತ ಯುದ್ಧರಂಗಕ್ಕೆ ಹೋಗಬೇಕಾಗಿ ಬಂದದ್ದರಿಂದ ರಾಜ್ಯವ್ಯವಹಾರ ಗಳೊಂದಿಗೆ ಇವನ ಸಂಪರ್ಕ ಕಡಿಯಿತು. ಚಕ್ರವರ್ತಿನಿಯ ಕೈಗೆ ಅಧಿಕಾರ ವರ್ಗವಾಯಿತು. ಆಸ್ಥಾನದಲ್ಲಿ ಪ್ರತಿಯೊಬ್ಬರೂ ಸಂಶಯಕ್ಕೆ ಈಡಾದರು. ನಿಕೊಲಸ್ ಹೆಚ್ಚುಹೆಚ್ಚಾಗಿ ಏಕಾಂಗಿಯಾಗುತ್ತಿದ್ದ. 1917ರಲ್ಲಿ ಪೆಟ್ರೊಗ್ರಾಡ್‍ನಲ್ಲಿ ಬಂಡಾಯ ಬೆಳೆದಾಗ ಉಗ್ರ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಹೇಳಿದ. ಆದರೆ ಪರಿಸ್ಥಿತಿ ಕೈಮೀರಿತ್ತು. ನಿಕೊಲಸ್ ಸಿಂಹಾಸನತ್ಯಾಗ ಮಾಡಬೇಕಾಯಿತು. ಇವನೂ ಇವನ ಸಂಸಾರದವರೂ ಸೆರೆಯಾದರು. 1918ರಲ್ಲಿ ಯೆಕಾಟೆರಿನ್‍ಬರ್ಗ್‍ನಲ್ಲಿ ಇವರೆಲ್ಲರನ್ನೂ ಕೊಲ್ಲಲಾಯಿತು. ಜಾರ್ ವಂಶ ಕೊನೆಗೊಂಡಿತು.								
	(ಎ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ